ಭೂ ಸೂಕ್ತ

20.00

ವರ್ತಮಾನ ಕಾಲದಲ್ಲಿ ಗೋಚಾರವಾಗುತ್ತಿರುವುದಷ್ಟೇ ಭೂಮಿಯಲ್ಲ. ವೇದ ಕಾಲೀನ ಋಷಿಗಳು ಅದರ ಭೂತ ಹಾಗೂ ಭವಿಷ್ಯತ್ತುಗಳನ್ನು ಕುರಿತು ಚಿಂತಿಸಿದ್ದಾರೆ. ನಾವು ಸತ್ಯ ಹಾಗೂ ಋತ, ದೀಕ್ಷೆ ಹಾಗೂ ತಪಸ್ಸು, ಪ್ರಾರ್ಥನೆ ಹಾಗೂ ಪೂಜೆ ಮುಂತಾದ ವೇದ ಮೌಲ್ಯಗಳನ್ನು ಅನುಸರಿಸಿ ಬದುಕಿದರೆ ಈ ಭೂಮಿಯ ಸುಖದ ತಾಣವಾಗಬಲ್ಲದು ಎಂಬುದು ಋಷಿಗಳ ನಂಬಿಕೆಯಾಗಿತ್ತು.

ಅಥರ್ವ ವೇದದ ಭೂ ಸೂಕ್ತವು ಈ ಘೋಷಣೆಯೊಂದಿಗೆ ಆರಂಭಗೊಳ್ಳುತ್ತದೆ. ಇದೊಂದು ಶ್ರೇಷ್ಠ ಕಾವ್ಯ ಅಷ್ಟೇ ಆಗಿರದೆ, ವೈದಿಕ ಜೀವನ ಕುರಿತು ಮೌಲಿಕ ಮಾಹಿತಿ ನೀಡುವ ಆಕಾರವೂ (source) ಆಗಿದೆ. ಋಗ್ವೇದದಿಂದ ದೂರಸರಿದ ಕಾಲದಲ್ಲೂ ಋಗ್ವೇದೀಯ ಮೌಲ್ಯಗಳು ಪ್ರಬಲವಾಗಿ ಅಸ್ತಿತ್ವದಲ್ಲಿ ಇದ್ದವು ಎಂಬುದಕ್ಕೆ ಇದು ಸಾಕ್ಷಿಯಾಗಿದೆ.

ಭೂ ಸೂಕ್ತದಲ್ಲಿ ಉಲ್ಲೇಖಗೊಂಡಿರುವ ಗಿಡ-ಮರ, ಭೌಗೋಳಿಕ ಹಾಗೂ ಹವಾಮಾನ, ಖನಿಜ ಸಂಪತ್ತು, ವೈವಿಧ್ಯಮಯ ಜನರು ಹಾಗೂ ಅವರ ವೈದಿಕ ಧರ್ಮಾಚರಣೆ ವರ್ಣನೆಯನ್ನು ಗಮನಿಸಿದ ಕೆಲವರು ಭೂಮಿ ಎಂದರೆ ಭಾರತದ ಭೂಮಿ ಅಷ್ಟೆ ಎಂಬುದಾಗಿ ಅರ್ಥೈಸಿಕೊಂಡಿದ್ದಾರೆ. ಸ್ವಲ್ಪ ಮಟ್ಟಿಗೆ ಇದು ಸರಿ ಎನಿಸಿದರೂ, ಓದುಗರ ಮೇಲೆ ಪ್ರಭಾವ ಬೀರುವ ಅಂಶ ಎಂದರೆ, ಸೂಕ್ತದ ಭವ್ಯ ಕಾವ್ಯಮಯತೆ ಹಾಗೂ ಸೌಂದರ್ಯ ದೃಷ್ಟಿ ಮತ್ತು ಮನುಷ್ಯನ ಬದುಕಿನ ಪರಿಪೂರ್ಣತೆ. ಈ ಕಾವ್ಯವು ವೈಶ್ವಿಕವಾದದ್ದೇ ಹೊರತು ಸ್ಥಳೀಯ ಮಟ್ಟಕ್ಕೆ ಸೀಮಿತಗೊಂಡಿಲ್ಲ. ಭೂಮಿಯ ಪರಿಮಳವನ್ನು ಸೂಸುವ ಈ ಕಾವ್ಯ ಭಾಗವನ್ನು ಅಥರ್ವ ವೇದ ಸಂಹಿತೆಯ ೧೨ನೇ ಕಾಂಡದಿಂದ ಆಯ್ದುಕೊಳ್ಳಲಾಗಿದೆ(೧೨.೧). ವೇದ ಸಾಹಿತ್ಯಕ್ಕೆ ಅಥರ್ವ ವೇದ ನೀಡಿದ ಅಮೂಲ್ಯ ಕೊಡುಗೆ ಇದಾಗಿದೆ.

ಋಷಿಗಳು ತಾವು ಜೀವಿಸುತ್ತಿರುವ ಭೂಮಿಯ ಮೇಲೆ ಇಂದ್ರ ಸಾಮ್ರಾಜ್ಯ ಇರಬೇಕೇ ಹೊರತು ವೃತ್ರನ ಅಧಿಪತ್ಯ ಇರಕೂಡದು ಎಂಬ ಆಯ್ಕೆ ಹೊಂದಿದ್ದರು. ಇಂದ್ರನು ಬೆಳಕಿನ ಶಕ್ತಿಗೂ ವೃತ್ರನು ಅಂಧಕಾರಕ್ಕೂ ಪ್ರತೀಕ ಆಗಿದ್ದಾರೆ. ಋತದ ರಕ್ಷಣೆ ಹಾಗೂ ಅತಿಕ್ರಮಣ ಪ್ರತಿರೋಧಕ್ಕಾಗಿ ಸಂಘರ್ಷ ಅನಿವಾರ್ಯವಾದದ್ದು ಎಂಬುದನ್ನು ಅವರು ಒಪ್ಪಿಕೊಳ್ಳುತ್ತಾರೆ. (ಈ ಸಂಘರ್ಷ ಸಾಂಕೀತಿಕವಾದದ್ದೇ ಹೊರತು ದೈಹಿಕವಾದ್ದಲ್ಲ) ಹೀಗಾಗಿ ಋಷಿಗಳ ಪುಣ್ಯದಿಂದ ಪುನೀತಗೊಂಡ ಹಾಗೂ ಅವರ ಆದರ್ಶಗಳಿಂದ ಪಾವನಗೊಂಡ ಭೂ ಸೂಕ್ತದ ಭೂಮಿಯನ್ನು ಭಾರತೀಯರೆಲ್ಲ ಪುಣ್ಯ ಭೂಮಿ ಎಂದು ಪರಿಗಣಿಸಿದ್ದಾರೆ. ಭಾರತಕ್ಕೆ ಬಂದೊದಗಿದ ಸಂಕಟಮಯ ಸಂದರ್ಭಗಳಲ್ಲಿ ಇಲ್ಲಿನ ಜನರು ಪ್ರೇರಣೆ ಪಡೆದದ್ದು ತಮ್ಮ ಋಷಿ – ಮುನಿಗಳ ತಪಸ್ಸು ಹಾಗೂ ಅವರ ಸತ್ಯ, ನ್ಯಾಯ ಹಾಗೂ ಆಧ್ಯಾತ್ಮಿಕ ಶಿಸ್ತು (ಸತ್ಯ, ಋತ, ತಪಸ್ಸು) ಮತ್ತು ಸಕಲ ಜೀವಿಗಳ ಆರೋಗ್ಯ ಹಾಗೂ ಸುಖೀ ಜೀವನ ಕುರಿತ ಪ್ರಾರ್ಥನೆ ಇವುಗಳಿಂದ.

ಮನುಷ್ಯ ಭೂಮಿಯ ಮಡಿಲಲ್ಲಿ ವಾಸವಾಗಿದ್ದಾನೆ. ಆದುದರಿಂದ ಅದನ್ನು ತಾಯಿ ಎಂಬ ಪೂಜ್ಯ ಭಾವನೆಯಿಂದ ಕಾಣಬೇಕಾದದ್ದು ಅವನ ಕರ್ತವ್ಯವಾಗಿದೆ. ಅವಳ ನಿರಂತರ ಆಶೀರ್ವಾದದಿಂದ ಸುಖೀ ಜೀವನ ನಡೆಸಬಹುದೆಂಬ ವಿಶ್ವಾಸ ತಳೆಯಬೇಕಾಗಿದೆ. ಅದನ್ನು ಶೋಷಣೆಗೆ ಈಡುಮಾಡದೆ ಅದರ ಸಂರಕ್ಷಣೆ, ಸಂವರ್ಧನೆಗಾಗಿ ಪ್ರಯತ್ನಿಸುವುದು ನಮ್ಮನ್ನು ನಾವೇ ಕಾಪಾಡಿಕೊಳ್ಳಲು ಮಾಡುವ ಪ್ರಯತ್ನವಾಗಿದೆ.

ಮನುಷ್ಯನೊಳಗೆ ಸುಪ್ತವಾಗಿ ಇರುವ ಸೂಕ್ಷ್ಮ, ಕೋಮಲ ಭಾವನೆಗಳನ್ನು, ರಾಷ್ಟ್ರಭಕ್ತಿಯನ್ನು ಜಾಗೃತಗೊಳಿಸಬಲ್ಲ ಶಕ್ತಿಯನ್ನು ಭೂ ಸೂಕ್ತ ಹೊಂದಿದೆ. ಋಷಿ – ಮುನಿಗಳು ತೋರಿದ ಪರಿಸರ ಪ್ರಜ್ಞೆಯನ್ನು ನಾವೆಲ್ಲರೂ ಮೈಗೂಡಿಕೊಂಡು ಈ ಭೂಮಿಯನ್ನು ಶಾಂತಿ, ಸಹನೆ, ಸುಖ, ಸಮೃದ್ಧಿ, ಸೌಂದರ್ಯ ಇವುಗಳ ತಾಣವಾಗಿಸಲು ಭೂ ಸೂಕ್ತ ಕರೆ ನೀಡುತ್ತದೆ.

SKU: 92cc227532d1 Category: